ಕಡಲೆಕಾಯಿ : ಲೆಗ್ಯುಮಿನೋಸೀ ಕುಟುಂಬದ ಆರಕಿಸ್ ಹೈಪೊಜಿಯ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ. ಇದಕ್ಕೆ ನೆಲಗಡಲೆ ಎಂಬ ಹೆಸರೂ ಉಂಟು. ಇದರ ಕಾಯಿಗಳು ಮಣ್ಣಿನಲ್ಲಿ ಇಳಿದು ಬೆಳೆಯುವುದರಿಂದ ಈ ಹೆಸರು. ಕೆಲವು ಭಾಗಗಳಲ್ಲಿ ಇದನ್ನು ಸೇಂಗಾ ಎಂದೂ ಕರೆಯುತ್ತಾರೆ. ಇದರ ಮೂಲ ಪ್ರದೇಶ ಯಾವುದು ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಅದು ದಕ್ಷಿಣ ಅಮೆರಿಕದ ಬ್ರೆಜಿûಲ್ ಇರಬಹುದು ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಅಮೆರಿಕದ ಹಲವಾರು ಭಾಗಗಳಲ್ಲಿ ಮತ್ತು ಆಫ್ರಿಕದಲ್ಲಿ ಇದೊಂದು ಪ್ರಾಮುಖ್ಯವಾದ ಬೆಳೆ. ಉಷ್ಣವಲಯದ ಬೆಳೆಯಾಗಿದ್ದರೂ ಸಮಶೀತೋಷ್ಣವಲಯದಲ್ಲಿ ಕೂಡ ಇದನ್ನು ಬೆಳೆಯಬಹುದು. ಸಾಮಾನ್ಯವಾಗಿ ಉತ್ತರ  ಅಕ್ಷಾಂಶ 450 ಯಿಂದ ದಕ್ಷಿಣ ಅಕ್ಷಾಂಶ 350 ವರೆಗಿನ ಎಲ್ಲ ದೇಶಗಳಲ್ಲಿಯೂ ಇದನ್ನು ಬೆಳೆಯುತ್ತಾರೆ. ಭಾರತಕ್ಕೆ ಇದರ ಪ್ರವೇಶವಾದದ್ದು ವಾಸ್ಕೋಡಗಾಮಾ ಇಲ್ಲಿಗೆ ಬಂದ ಅನಂತರವೇ. ಆಗ ಕಡಲೆಕಾಯಿಗೆ ಇಂದಿನ ಮಹತ್ತ್ವವಿರಲಿಲ್ಲವಾದ್ದರಿಂದ ಅದನ್ನು ಬೆಳೆಯುವ ಕ್ಷೇತ್ರವೂ ಕಡಿಮೆಯೇ ಇತ್ತು. ಕ್ರಮೇಣ ಇದರ ಪ್ರಾಮುಖ್ಯ ಹೆಚ್ಚಿದಂತೆ ಅದನ್ನು ಬೆಳೆಯುವ ಕ್ಷೇತ್ರವೂ ಹೆಚ್ಚುತ್ತ ಹೋಯಿತು. 

ಈಗ ಭಾರತ ಇದರ ಬೆಳೆಯಲ್ಲಿ ಜಗತ್ತಿನಲ್ಲಿ ಮೊದಲನೆಯ ಸ್ಥಾನಪಡೆದಿದೆ. ಪ್ರಪಂಚದ ಒಟ್ಟು ನೆಲಗಡಲೆಯಲ್ಲಿ ಸು. ಶೇ. 40ರಷ್ಟು ಭಾರತದಲ್ಲಿಯೇ ಬೆಳೆಯುತ್ತದೆ; ಮತ್ತು 40ರಿಂದ 60ರಷ್ಟು ಭಾಗ ಭಾರತದಿಂದಲೇ ಹೊರ ದೇಶಗಳಿಗೆ ರಫ್ತಾಗುತ್ತದೆ. 1955-56ನೆಯ ಸಾಲಿನಲ್ಲಿ 51,34,000 ಹೆಕ್ಟೇರುಗಳಿಗೆ ಸೀಮಿತವಾಗಿದ್ದ ನೆಲಗಡಲೆ ಬೆಳೆಯ ಕ್ಷೇತ್ರ 1967-68ರ ಸಮಯಕ್ಕೆ 75,53,000 ಹೆಕ್ಟೇರುಗಳಷ್ಟಾಯಿತು. ಇಳುವರಿಯೂ 38,61,000 ಟನ್ನುಗಳಿಂದ 58,31,000 ಟನ್ನುಗಳಿಗೇರಿತು.

1967-68ರ ಸಮಯಕ್ಕೆ ಮೈಸೂರು ರಾಜ್ಯದಲ್ಲಿಯ ಸೇಂಗಾ ಬೆಳೆಯ ಕ್ಷೇತ್ರ 7,78,000 ಹೆಕ್ಟೇರುಗಳಷ್ಟಿದ್ದು, ಉತ್ಪನ್ನ 5,03,000 ಟನ್ನುಗಳಷ್ಟಿತ್ತು. ಇದರ ಎಣ್ಣೆಗೆ ಔದ್ಯೋಗಿಕವಾಗಿ ಮಹತ್ತ್ವವಿರುವದರಿಂದ ಪ್ರತಿ ವರ್ಷವೂ ಕಡಲೆಕಾಯಿಯ ಬೆಳೆಯ ಕ್ಷೇತ್ರ ವಿಸ್ತರಿಸುತ್ತಲೇ ಇದೆ.
ಕಡಲೆಕಾಯಿಯನ್ನು ಬೆಳೆಸಲು, ಉಷ್ಣ ಹವಾಮಾನ, ಉತ್ತಮವಾಗಿದ್ದರೂ ಸಮಶೀತೋಷ್ಣ ವಲಯದಲ್ಲಿ ಕೂಡ ಬೇಸಗೆಯ ಬೆಳೆಯಾಗಿ ಬೆಳೆಯಬಹುದು. ಕೇವಲ ಮಳೆಯನ್ನವಲಂಬಿಸಿಯೇ ಬೆಳೆಸುವುದಾದರೆ ಒಳ್ಳೆಯ ಬೆಳೆಗೆ ಸು. 76-86 ಸೆಂಮೀ ಅಂಗುಲಗಳಷ್ಟು ಮಳೆ ಬೇಕು. ಆದರೆ ಸು. 50-55 ಸೆಂಮೀ ಅಂಗುಲ ಮಳೆಯಾಗುವ ಪ್ರದೇಶಗಳಲ್ಲಿಯೂ ಇದನ್ನು ಬೆಳೆಸಬಹುದು. ಬೆಳೆಯ ಕಾಲಾವಧಿಯಲ್ಲಿ ಸು. 139-152 ಸೆಂಮೀ ಅಂಗುಲಗಳಿಗಿಂತ ಹೆಚ್ಚಿಗೆ ಮಳೆಯಾದರೆ ಅಷ್ಟೇನೂ ಹಿತಕರವಲ್ಲ.

ನೀರು ಬಸಿದು ಹೋಗುವ ಮರಳು ಮಿಶ್ರಿತ ಇಲ್ಲವೆ ಮಸಾರಿ ಮಣ್ಣು ಇದಕ್ಕೆ ಉತ್ತಮ. ಉತ್ತರ ಭಾರತದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ನೆರೆಮಣ್ಣಿನಲ್ಲಿಯೂ ಉತ್ತಮವಾದ ಬೆಳೆಯನ್ನು ಪಡೆಯಲು ಸಾಧ್ಯ. ಆದರೆ ಈ ಬೆಳೆಗೆ ಇರುವ ಆರ್ಥಿಕ ಪ್ರಾಮುಖ್ಯದಿಂದಾಗಿ ಅಷ್ಟೊಂದು ಯೋಗ್ಯವಾಗಿಲ್ಲವಾದರೂ, ಎರೆಮಣ್ಣು ಮತ್ತು ಕೆಂಪುಮಣ್ಣಿನ ಪ್ರದೇಶಗಳಲ್ಲಿಯೂ ಇದನ್ನು ಬೆಳೆಸಲಾಗುತ್ತದೆ. ಅತಿ ಹುಳಿ, ಉಷ್ಣ ಇಲ್ಲವೇ ಸವಳು ಭೂಮಿಗಳನ್ನುಳಿದು ಇನ್ನೆಲ್ಲ ಮಣ್ಣುಗಳಲ್ಲಿಯೂ ಇದನ್ನು ಚೆನ್ನಾಗಿ ಬೆಳೆಸಬಹುದು.

ಇದು ದ್ವಿದಳಧಾನ್ಯಗಳ ಸಸ್ಯವರ್ಗಕ್ಕೆ ಸೇರಿದ ಬೆಳೆ. ಬಹಳ ಎತ್ತರವಾಗಿ ಬೆಳೆಯುವುದಿಲ್ಲ. ಆದರೆ ಹಲವಾರು ಟೊಂಗೆಗಳೊಡೆದು ನೆಲವನ್ನು 0.1858-0.2787 ಚಮೀ ಗಳಷ್ಟು ವಿಸ್ತಾರವಾಗಿ ಆಕ್ರಮಿಸಿಕೊಂಡಿರುತ್ತದೆ. ಎಲೆಗಳು ಸಂಯುಕ್ತ ಮಾದರಿಯವು. ಪ್ರತಿಯೊಂದು ಎಲೆಯಲ್ಲೂ ಅಂಡಾಕಾರದ 4 ಉಪಪತ್ರಗಳಿವೆ. ಪ್ರತಿಯೊಂದು ಉಪಪತ್ರದ ಉದ್ದ ಸು. ಒಂದು ಅಂಗುಲ, ಅಗಲ ಅರ್ಧ ಅಂಗುಲ. ಎಲೆಗಳ ಕಂಕುಳಗಳಲ್ಲಿ (ಆ್ಯಕ್ಸಿಲ್) ಹಳದಿಯ ಬಣ್ಣದ ಹೂಗಳು ಗುಂಪುಗುಂಪಾಗಿ ಇಲ್ಲವೆ ಪ್ರತ್ಯೇಕವಾಗಿ ಇವೆ. ಗರ್ಭಧಾರಣೆಯ ಅನಂತರ ಉದ್ದವಾದ ದೇಟುಗಳ (ಗೈನೊಫೋರ್) ಮೇಲಿರುವ ಅಂಡಾಶಯಗಳು ನೆಲದೊಳಗೆ ಇಳಿದು ಬೆಳೆಯುತ್ತವೆ. ಹೀಗೆ ನೆಲದಲ್ಲಿಯೇ ಬಲಿತ ಕಾಯಿಗಳಲ್ಲಿ ನಸುಗೆಂಪು ಇಲ್ಲವೆ ದಟ್ಟ ಕೆಂಪು ಬಣ್ಣದ 2-3 ಬೀಜಗಳಿವೆ. ಕಡಲೆಕಾಯಿಯ ಬೇರು ತಾಯಿ ಬೇರಿನ ವರ್ಗಕ್ಕೆ ಸೇರಿದ್ದು. 

ಬೇರುಗಳ ಮೇಲೆ ಚಿಕ್ಕ ಚಿಕ್ಕ ಗಂಟು (ನಾಡ್ಯೂಲ್)ಗಳನ್ನು ಕಾಣಬಹುದು. ಇವುಗಳಲ್ಲಿರುವ ಏಕಾಣುಜೀವಿ (ಬ್ಯಾಕ್ಟೀರಿಯ)ಗಳಿಂದ ವಾತಾವರಣದ  ಸಾರಜನಕ ಸಸ್ಯಗಳಿಗೆ ದೊರೆಯುವ ರೂಪಕ್ಕೆ ರೂಪಾಂತರಗೊಳ್ಳುತ್ತದೆ.

ಕಡಲೆಕಾಯಿಯಲ್ಲಿ ಹಲವಾರು ಜಾತಿಗಳಿವೆ. ಇವನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಗೆಜ್ಜೆ ಸೇಂಗಾ ಮತ್ತು ಹಬ್ಬು ಸೇಂಗಾ. ಗೆಜ್ಜೆ ಸೇಂಗಾದಲ್ಲಿ ಕಾಯಿಗಳು ಗಿಡಕ್ಕೆ ಸಮೀಪವಾಗಿ ಗುಂಪುಗುಂಪಾಗಿ ಬೆಳೆದಿರುತ್ತವೆ. ಹಬ್ಬು ಸೇಂಗಾದಲ್ಲಿ, ಟೊಂಗೆಗಳು ಬಳ್ಳಿಯಂತೆ ನೆಲದ ಮೇಲೆ ಹರಡಿದ್ದು, ಅವುಗಳ ಗಿಣ್ಣುಗಳು (ನೋಡ್ಸ್‌) ನೆಲವನ್ನು ಮುಟ್ಟಿದಲ್ಲೆಲ್ಲ ಒಂದು ಅಥವಾ ಹೆಚ್ಚು ಕಾಯಿಗಳು ಬಿಡಬಹುದು. ಸಾಮಾನ್ಯವಾಗಿ ಗೆಜ್ಜೆ ಸೇಂಗಾ 100-110 ದಿನಗಳ ಬೆಳೆ. ಇದರ ಅನಂತರ ಜೋಳ, ಗೋದಿ, ಕಡಲೆ, ಕುಸುಬೆ ಮತ್ತು ಅಗಸೆಯಂಥ ಹಿಂಗಾರು ಬೆಳೆಗಳನ್ನು ಬೆಳೆಯಬಹುದು. ಕಡಲೆಕಾಯಿಗಳಲ್ಲಿ ಹಲವಾರು ಸುಧಾರಿಸಿದ ತಳಿಗಳಿವೆ. ಅವುಗಳಲ್ಲಿ ಸ್ಪ್ಯಾನಿಷ್ ಇಂಪ್ರುವ್ಡ್‌, ಎಚ್.ಜಿ. -S. ಟಿ.ಎಂ.ವಿ.-2 ಮತ್ತು ಎಸ್ 206 ಎಂಬ ತಳಿಗಳು ಮುಖ್ಯವಾದುವು. ಹಬ್ಬು ಸೇಂಗಾದ ಕಾಲಾವಧಿ ಗೆಜ್ಜೆ ಸೇಂಗಾಕ್ಕಿಂತ ಹೆಚ್ಚಾಗಿರುತ್ತದೆ. ಅಂದರೆ ಸು. 150-160 ದಿನಗಳು. ಇದರಲ್ಲಿ ಎಚ್. ಜಿ.-7 ಮತ್ತು ಪಾಂಡಿಚೆರಿ-8 ಎಂಬ ತಳಿಗಳು ಮುಖ್ಯವಾಗಿವೆ. ಅಧಿಕ ಕಾಲಾವಧಿಯನ್ನು ತೆಗೆದುಕೊಳ್ಳುವ ಈ ಬೆಳೆಗಳ ಇಳುವರಿಯೂ ಹೆಚ್ಚು. ಸಂಪುರ್ಣವಾಗಿ ಮಳೆಯನ್ನವಲಂಬಿಸಿಯೇ ಬೆಳೆದ ಗೆಜ್ಜೆ ಸೇಂಗಾದಲ್ಲಿ ಪ್ರತಿ ಹೆಕ್ಟೇರಿಗೆ ಸು. 800-1,000 ಕಿಗ್ರಾಂಗಳಷ್ಟು ಕಾಯಿ ದೊರೆಯುತ್ತಿದ್ದರೆ ಹಬ್ಬು ಸೇಂಗಾದಿಂದ ಸು. 1,000-1,200 ಕಿಗ್ರಾಂ ಕಾಯಿ ದೊರೆಯುತ್ತವೆ. ಈ ಕಾಯಿಗಳನ್ನು ಒಡೆದಾಗ ದೊರೆಯುವ ಬೀಜದ ಪ್ರಮಾಣ ನೂರಕ್ಕೆ 70-75ರಷ್ಟು. 

ನೀರಾವರಿಯಿಂದ ಬೆಳೆದ ಬೆಳೆ, ಮಳೆ ಯನ್ನವಲಂಬಿಸಿದ ಬೆಳೆಗಿಂತ ಎರಡು ಮೂರು ಪಟ್ಟು ಅಧಿಕ ಉತ್ಪನ್ನವನ್ನು ಕೊಡುತ್ತದೆ.
ನೆಲಗಡಲೆಯ ಕಾಯಿಗಳು ನೆಲದಲ್ಲಿಯೇ ಇಳಿದು ಬೆಳೆಯುವುದರಿಂದ ನೆಲವನ್ನು 12.7-15.24 ಸೆಂಮೀ ಆಳದವರೆಗೂ ಚೆನ್ನಾಗಿ ಉಳುವುದು ಅಗತ್ಯ. ಹಿಂದಿನ ಬೆಳೆಯ ಕಟಾವು ಆದಕೂಡಲೆ ನೆಲವನ್ನು ಉತ್ತಿಟ್ಟು, ಮುಂಗಾರು ಮಳೆಯಾದೊಡನೆ ಎರಡು ಮೂರು ಸಲ ಕುಂಟೆಯನ್ನು ಹೊಡೆದು ನೆಲವನ್ನು ಹಸಿ ಮಾಡಬೇಕು. ಸು. 2 ಟನ್ನುಗಳಷ್ಟು ಹಟ್ಟಿಯ ಗೊಬ್ಬರವನ್ನು ಮಣ್ಣಿನೊಡನೆ ಮಿಶ್ರ ಮಾಡುವುದು ಸಾಮಾನ್ಯವಾದ ಕ್ರಮ. ಇತ್ತೀಚಿನ ಸಂಶೋಧನೆಗಳ ಮೇಲಿಂದ, ಬಿತ್ತುವುದಕ್ಕೆ ಮೊದಲು ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದು ಕೂಡ ಲಾಭದಾಯಕ ಎಂದು ಕಂಡುಬಂದಿದೆ. ಪ್ರತಿ ಹೆಕ್ಟೇರಿಗೆ 25 ಕಿಗ್ರಾಂ ಸಾರಜನಕ, 50 ಕಿಗ್ರಾಂ ರಂಜಕ ಮತ್ತು 37 ಕಿಗ್ರಾಂ ಪೊಟ್ಯಾಶ್ ಗೊಬ್ಬರಗಳನ್ನು ಮೈಸೂರು ರಾಜ್ಯದ ಎಲ್ಲ ಭಾಗಗಳಲ್ಲೂ ಬಳಸಬಹುದು. ಈ ಸೀಮೆ ಗೊಬ್ಬರಗಳನ್ನು ಭೂಮಿಯಲ್ಲಿ ಬೀಜಕ್ಕಿಂತ ಆಳವಾಗಿ ಹಾಕುವುದು ಉತ್ತಮ.

ಬಿತ್ತುವುದಕ್ಕೆ ಮೊದಲು ಬೀಜಗಳನ್ನು ಕಾಯಿಗಳಿಂದ ಹೊರತೆಗೆದು ಬೀಜೋಪಚಾರ ಮಾಡುವುದು ರೋಗಗಳ ಹತೋಟಿಯ ದೃಷ್ಟಿಯಿಂದ ಅತ್ಯಾವಶ್ಯಕ. ಅಗ್ರೊಸಾನ್ ಇಲ್ಲವೆ ಕ್ಯಾಪ್ಟಾನ್ ಎಂಬ ರಾಸಾಯನಿಕ ಪದಾರ್ಥಗಳನ್ನು ಪ್ರತಿ ಕಿಗ್ರಾಂಗೆ ಎರಡು ಗ್ರಾಂಗಳಂತೆ ಲೇಪಿಸಿ 
ಬಿತ್ತುವುದರಿಂದ ಸೋಂಕುರೋಗ ತಗಲಲಾರವು. ಪ್ರತಿ ಹೆಕ್ಟೇರಿಗೆ, ಗೆಜ್ಜೆ ಸೇಂಗವಾಗಿದ್ದರೆ 100 ಕಿಗ್ರಾಂ, ಹಬ್ಬು ಸೇಂಗವಾದರೆ 60 ಕಿಗ್ರಾಂಗಳಷ್ಟು ಬೀಜ ಬೇಕು. ಬೀಜಗಳನ್ನು ಕೈಯಿಂದ, ನೇಗಿಲ ಸಾಲಿನ ಹಿಂದೆ ಇಲ್ಲವೆ ಕೂರಿಗೆಗಳ ಮೂಲಕ ಬಿತ್ತಬಹುದು ಗೆಜ್ಜೆ 

ಸೇಂಗಾವನ್ನು ಸು. 30.48 ಸೆಂಮೀಗಳ ಅಂತರದ ಸಾಲುಗಳಲ್ಲಿಯೂ ಹಬ್ಬು ಸೇಂಗಾವನ್ನು 24" ಗಳ ಅಂತರದ ಸಾಲುಗಳಲ್ಲಿಯೂ ಸು. 2"-3" ಆಳವಾಗಿ ಬಿತ್ತಬೇಕು. ಬಿತ್ತುವ ಸಮಯದಲ್ಲಿ ನೆಲದಲ್ಲಿ ಸಾಕಷ್ಟು ತೇವವಿಲ್ಲದಿದ್ದರೆ ಬೀಜಗಳ ಮೊಳಕೆಯೊಡೆಯುವ ಪ್ರಮಾಣ ಬಹಳ ಕಡಿಮೆಯಾಗಿಬಿಡುತ್ತದೆ. ಬಿತ್ತಿದ 6-7 ದಿನಗಳಲ್ಲಿ ಸಸಿಗಳ ಸಾಲುಗಳನ್ನು ಕಾಣಬಹುದು.

ಸಾಮಾನ್ಯವಾಗಿ, ಮಳೆಯನ್ನವಲಂಬಿಸಿದ ಬೆಳೆಯನ್ನು ಜೂನ್ ತಿಂಗಳಲ್ಲಿ ಬಿತ್ತುತ್ತಾರೆ. ನೀರಾವರಿ ಇರುವಾಗ ಜನವರಿ-ಫೆಬ್ರುವರಿ ತಿಂಗಳಲ್ಲಿ ಕೂಡ ಬಿತ್ತಿ ಬೇಸಿಗೆಯ ಬೆಳೆಯನ್ನು ತೆಗೆದುಕೊಳ್ಳಬಹುದು. ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬತ್ತದ ಹೊಲಗಳಲ್ಲಿ, ಬತ್ತದ ಕೊಯಿಲಾದ ಅನಂತರ ಕಡಲೆ ಕಾಯಿಯನ್ನು ಬಿತ್ತುವ ಪದ್ಧತಿಯೂ ಉಂಟು. ಗೆಜ್ಜೆ ಸೇಂಗಾ ಬಿತ್ತಿದ 60 ದಿನಗಳ ಅನಂತರ ಹೂ ಬಿಡಲು ಪ್ರಾರಂಭಿಸಿದರೆ, ಹಬ್ಬು ಸೇಂಗಾ ಸು. 90-100 ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಬೆಳೆಗೆ 2-3 ಸಲವಾದರೂ ಎಡೆ ಹೊಡೆಯುವುದು ಅತ್ಯಾವಶ್ಯಕ. ಇದರಿಂದ ಕಳೆ ನಾಶವಾಗುವುದಲ್ಲದೆ, ಮಣ್ಣು ಸಹ ಸಡಿಲವಾಗುವುದು. ಕಳೆ ನಾಶಮಾಡಲು ಇತ್ತೀಚೆಗೆ ಹಲವಾರು ಕಳೆ ನಾಶಕಗಳನ್ನು ಉಪಯೋಗಿಸಲಾಗುತ್ತಿದೆ. ಉದಾಹರಣೆಗೆ ಟೋಕ್-ಇ-25. ಕೊನೆಯ ಎಡೆಯನ್ನು ಅಂಡಾಶಯದ ಬೆಳೆವಣಿಗೆಯಾಗಿ ಅದು ಭೂಮಿ ಗಿಳಿಯುವುದಕ್ಕೆ ಮುಂಚಿತವಾಗಿಯೇ ಮುಗಿಸಿರಬೇಕು. ಇದರಿಂದ ಎಲ್ಲ ಕಾಯಿಗಳೂ ನೆಲದಲ್ಲಿ ಬೆಳೆಯುವುದಕ್ಕೆ ಸಹಾಯವಾಗುವುದು.

ಕಾಯಿಗಳು ಬಲಿತಾಗ ಗಿಡದ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಲು ತೊಡಗುತ್ತವೆ. ಆ ಸಮಯದಲ್ಲಿ ಕಾಯಿಗಳನ್ನು ಒಡೆದು ನೋಡಿದರೆ, ಬೀಜಗಳ ಮೇಲಿನ ಹೊದಿಕೆ ನಸುಗೆಂಪು ಇಲ್ಲವೆ ಕೆಂಪು ವರ್ಣಕ್ಕೆ ತಿರುಗಿರುವುದು ಕಂಡುಬರುತ್ತದೆ. ಕೀಳುವುದಕ್ಕೆ ಮೊದಲು ಒಂದು ಮಳೆಯಾದರೆ ಕೆಲಸ ಸುಲಭವೂ ಪರಿಪುರ್ಣವೂ ಆಗುತ್ತದೆ. ಅದಿಲ್ಲವಾದರೆ ಕಾಯಿಗಳನ್ನು ನೆಲದಿಂದ ಅಗೆದು ತೆಗೆಯುವುದು ಬಹಳ ಕಷ್ಟ. ಗೆಜ್ಜೆ ಸೇಂಗಾವನ್ನು ಕೈಯಿಂದಲೇ ಗಿಡಗಳನ್ನೆಳೆದು ಕೀಳಬಹುದು ಮತ್ತು ಹಬ್ಬು ಸೇಂಗಾವನ್ನು ಕೀಳಲು ನೇಗಿಲು ಇಲ್ಲವೆ ಸಯಾನ ಕುಂಟೆಗಳನ್ನು ಉಪಯೋಗಿಸಬಹುದು. ಇದರಿಂದ ಬಳ್ಳಿ ಕೀಳುವ ಖರ್ಚು ಉಳಿತಾಯವಾಗುವುದು. ಕಡಲೆಕಾಯಿಯನ್ನು ಕೀಳುವ ಸಮಯದಲ್ಲಿ ಅತಿಯಾಗಿ ಮಳೆಯಾದರೆ ಬೀಜಗಳು ನೆಲದಲ್ಲಿಯೇ ಮೊಳಕೆಯೊಡೆಯುವ ಸಂಭವವೂ ಉಂಟು. ಅನಂತರ ಗಿಡಗಳಿಂದ ಕಾಯಿಗಳನ್ನು ಬೇರ್ಪಡಿಸಿ, ಕಾಯಿಗಳು ಸಂಪುರ್ಣವಾಗಿ ಒಣಗುವವರೆಗೂ ಬಿಸಿಲಿನಲ್ಲಿ ಒಣಗಿಸಬೇಕು. ಇದನ್ನು ಬಹಳ ದಿನಗಳವರೆಗೆ ಸಂಗ್ರಹಿಸಿಡುವ ಪ್ರಸಂಗವಿದ್ದಲ್ಲಿ ಕಾಯಿಗಳನ್ನು ಒಡೆಯದೇ ಹಾಗೆಯೇ ಇಡುವುದು ಸೂಕ್ತ. ಒಮ್ಮೊಮ್ಮೆ ಕಡಲೆಕಾಯಿ ಇಲ್ಲವೆ ಅದರ ಹಿಂಡಿಯನ್ನು ಸಂಗ್ರಹಿಸಿಟ್ಟಾಗ ಅದಕ್ಕೆ ಒಂದು ಜಾತಿಯ ಬೂಷ್ಟು (ಆಸ್ಪರ್ಜಿಲಸ್ ಫ್ಲೇವಸ್) ಬರುವ ಸಂಭವವುಂಟು. ಇದರಿಂದ ಒಂದು ಜಾತಿಯ ವಿಷಕಾರಿ ಪದಾರ್ಥ (ಆಫ್ಲೊಟಾಕ್ಸಿನ್) ಉತ್ಪತ್ತಿಯಾಗುತ್ತದೆ. ಅದರ ಸೇವನೆಯಿಂದ ಹಲವಾರು ಪ್ರಾಣಿಗಳು ರೋಗಕ್ಕೆ ತುತ್ತಾಗಿ ಮರಣ ಹೊಂದಬಹುದು. ಆದ್ದರಿಂದ ಇಂಥ ಬೂಷ್ಟು ಬರದಂತೆ ಕಡಲೆಕಾಯಿನ್ನು ಕಾಯ್ದಿಡುವುದು ಅವಶ್ಯ. ನೆಲಗಡಲೆಗೆ ಸಾರಜನಕವನ್ನು ರೂಪಾಂತರಿಸುವ ಗುಣ ಇದೆ. ಇದರಿಂದಾಗಿ, ಇದು ಬೆಳೆಗಳ ಸರದಿಯಲ್ಲಿ (ರೊಟೇಷನ್ ಆಫ್ ಕ್ರಾಪ್ಸ್‌) ಒಂದು ಅತಿ ಪ್ರಾಮುಖ್ಯವಾದ ಬೆಳೆಯಾಗಿರುತ್ತದೆ. ಗೋದಿ, ಜೋಳ, ಬತ್ತ, ಸಜ್ಜೆ, ಕಡಲೆ, ಔಡಲ, ಹತ್ತಿ ಮುಂತಾದ ಬೆಳೆಗಳ ಅನಂತರ ಸೇಂಗಾವನ್ನು ಸಾಮಾನ್ಯವಾಗಿ ಬೆಳೆಸುತ್ತಾರೆ. ಇದನ್ನು ಹತ್ತಿ, ತೊಗರಿ, ಜೌಡಲ ಜೋಳ, ಚೌಡಲ ಸಜ್ಜೆ ಮುಂತಾದ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿಯೂ ಬೆಳೆಸಬಹುದು.

ಕಡಲೆಕಾಯಿಗೆ ರೋಗ ಮತ್ತು ಹುಳುಗಳ ಬಾಧೆ ಕಡಿಮೆ. ಆದರೂ ಕೆಂಪುತಲೆ ಕಂಬಳಿಹುಳ, ಸುರುಳಿಹುಳು (ಲೀಫ್ ರೋಲರ್) ಮತ್ತು ಹೇನುಗಳ ಕಾಟ ಒಮ್ಮೊಮ್ಮೆ ಹೆಚ್ಚಾಗಬಹುದು. ಎಲೆಗಳ ಮೇಲಿನ ಚುಕ್ಕೆರೋಗ ಇದಕ್ಕೆ ಬರುವ ಅತಿ ಮುಖ್ಯ ರೋಗ. ಡೈಥೇನ್-Z-78 ಎಂಬ ರಾಸಾಯನಿಕ ಪದಾರ್ಥಗಳನ್ನು ಸೂಕ್ತ ಪ್ರಮಾಣದಲ್ಲಿ ಸಿಂಪಡಿಸುವುದರಿಂದ ಈ ರೋಗವನ್ನು ತಡೆಗಟ್ಟಲು ಸಾಧ್ಯ. ಕಾಯಿ ಬಲಿತ ಸಮಯದಲ್ಲಿ ಹಲವಾರು ಕಡೆಗಳಲ್ಲಿ ಕಾಡು ಹಂದಿಗಳ ಕಾಟ ಕಂಡುಬರಬಹುದು. ಮಂಗ, ಕಾಗೆ, ಮುಂತಾದ ಪ್ರಾಣಿಗಳೂ ಇದಕ್ಕೆ ಶತ್ರುಗಳು.

ಕಡಲೆಕಾಯಿಯಲ್ಲಿ ತಳಿಯನ್ನವಲಂಬಿಸಿ ಶೇ. 44-50ರಷ್ಟು ಎಣ್ಣೆಯಿರುತ್ತದೆ. ಈ ಎಣ್ಣೆಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ದಿನನಿತ್ಯದ ಅಡುಗೆಗೆ ಉಪಯೋಗಿಸುತ್ತಾರೆ. ಹೈಡ್ರಾಜನೀಕರಣ ಮಾಡಿ, ದ್ರವರೂಪದಲ್ಲಿರುವ ಎಣ್ಣೆಯನ್ನು ಘನೀಕರಿಸಿದಾಗ ಅದು ವನಸ್ಪತಿಯಾಗುತ್ತದೆ ಕಡಲೆಕಾಯಿ ಎಣ್ಣೆಯನ್ನು ಹಲವಾರು ಆಹಾರ ಪದಾರ್ಥಗಳನ್ನು ಕಾಯ್ದಿಡಲು ಉಪಯೋಗಿಸುವುದಲ್ಲದೆ, ಹಳ್ಳಿಗಳಲ್ಲಿ ಮನೆಗಳ ದೀಪವನ್ನು ಬೆಳಗಿಸಲು ಉಪಯೋಗಿಸುತ್ತಾರೆ. ಕಡಲೆಕಾಯಿಗಳನ್ನು ಹಸಿಯಾಗಿ ಹುರಿದು ಇಲ್ಲವೆ ಕರಿದು ತಿನ್ನುವುದು ಸಾಮಾನ್ಯವಾಗಿ ಬಳಕೆಯಲ್ಲಿದೆ. ಎಣ್ಣೆಯನ್ನು ತೆಗೆದಾದ ಮೇಲೆ ಉಳಿಯುವ ಹಿಂಡಿ ಅತ್ಯುತ್ತಮ ಗೊಬ್ಬರ. ಉತ್ತಮವಾದ ಪಶು ಆಹಾರವೂ ಅಹುದು. ಇದರ ಹೊಟ್ಟನ್ನು ಮಳೆಗೆ ತಾಗಿಸದೆ ಹಾಗೆಯೇ ಕಾಯ್ದಿಟ್ಟರೆ, ದನಗಳಿಗೆ ತಿನ್ನಿಸಲು ಉಪಯೋಗಿಸಬಹುದು. ಇದರಲ್ಲಿ ನೂರಕ್ಕೆ 15.5ರಷ್ಟು ಸಾರಜನಕವಿರುವುದಲ್ಲದೆ, 50ರಷ್ಟು ಶರ್ಕರ ಪಿಷ್ಟಗಳೂ ಇವೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ದ್ವಿದಳಧಾನ್ಯಗಳಲ್ಲಿ ಸೋಯಾಬೀನನ್ನು ಬಿಟ್ಟರೆ ಕಡಲೆಕಾಯಿಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕವಿದೆ. ಇದರಲ್ಲಿರುವ ಸಾರಜನಕದಲ್ಲಿ ಎಲ್ಲ ಬಗೆಯ ಆವಶ್ಯಕವಾದ ಅಮೈನೋ ಆಮ್ಲಗಳಿದ್ದರೂ ಗಂಧಕಯುಕ್ತ ಅಮೈನೊ ಆಮ್ಲಗಳು 
ಮತ್ತು ಟ್ರಿಪ್ಟೋಫೇನ್ಗಳ ಪ್ರಮಾಣ ಮಾತ್ರ ಕಡಿಮೆಯಿದೆ. ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಇರುವುವಲ್ಲದೆ ಎ, ಬಿ ಮತ್ತು ಬಿ2 ಜೀವಾತುಗಳೂ ಸಾಮಾನ್ಯವಾಗಿರುತ್ತವೆ.

ಕಡಲೆಕಾಯಿಯನ್ನು ಇತ್ತೀಚೆಗೆ ಹಾಲು ಮೊಸರು ಮತ್ತು ಬೆಣ್ಣೆಗಳನ್ನು ಸಹ ಮಾಡಲು ಉಪಯೋಗಿಸತೊಡಗಿದ್ದಾರೆ. ಇದರ ಹಾಲನ್ನು ಮುಂದೆ ಹೇಳುವ ರೀತಿಯಲ್ಲಿ ತಯಾರಿಸಬಹುದು : ಮೊದಲು ಬೀಜಗಳನ್ನು 1-11/2 ತಾಸಿನವರೆಗೆ ನೆನೆಹಾಕಿ ಅದರ ಮೇಲಿರುವ ಸಿಪ್ಪೆಯನ್ನು ತೆಗೆಯಬೇಕು. ಅನಂತರ ಬೀಜಗಳನ್ನು ಸ್ವಲ್ಪವೇ ನೀರಿನೊಂದಿಗೆ ಬೆರೆಸಿ ನುಣ್ಣಗೆ ಅರೆದು ಮಸ್ಲಿನ್ ಬಟ್ಟೆಯ ಮೂಲಕ ಶೋಧಿಸಬೇಕು. ಬಟ್ಟೆಯ ಮೇಲೆ ಉಳಿದ ಭಾಗವನ್ನು, ಎರಡು-ಮೂರು ಸಾರಿ ಹೀಗೆಯೇ ಅರೆದು ಶೋಧಿಸಬಹುದು. ಬಿಳಿಯ ಬಣ್ಣದ ಈ ಹಾಲಿಗೆ ಎಮ್ಮೆಯ ಇಲ್ಲವೆ ಹಸುವಿನ ಹಾಲನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸುವದರಿಂದ ಕಡಲೆಕಾಯಿ ವಾಸನೆ ಅಷ್ಟಾಗಿ ಉಳಿಯುವುದಿಲ್ಲ. ಇದನ್ನು ಕಾಯಿಸಿ ಹೆಪ್ಪು ಹಾಕಿ ತಯಾರಿಸಿದ ಮೊಸರು, ಸಾಮಾನ್ಯವಾಗಿ ಹಸುವಿನ ಹಾಲಿನ ಮೊಸರಿನಂತೆಯೇ ಇರುತ್ತದೆ.

ಕಡಲೆಕಾಯಿಯ ಹಿಂಡಿಯನ್ನು ಇತ್ತೀಚೆಗೆ ಮಕ್ಕಳ ಆಹಾರವನ್ನು ತಯಾರಿಸಲು ಉಪಯೋಗಿಸುವುದಲ್ಲದೆ, ಬಿಸ್ಕತ್ತುಗಳನ್ನು ತಯಾರಿಸಲೂ ಉಪಯೋಗಿಸುತ್ತಾರೆ. ಸಾರಜನಕದ ಕೊರತೆ ಅತಿಯಾಗಿರುವ ಭಾರತದಂಥ ದೇಶಗಳಲ್ಲಿ ಅದನ್ನು ನಿವಾರಿಸಲು ಕಡಲೆಕಾಯಿ ಹಿಂಡಿಯಿಂದ ತಯಾರಿಸಿದ ಹಿಟ್ಟಿನಿಂದ ಸಾಧ್ಯ ಎಂದು ತಜ್ಞರ ಅಭಿಪ್ರಾಯ. ಇದರ ಸಾರಜನಕವನ್ನುಪಯೋಗಿಸಿ ಆರ್ಡಿಲ್ ಎಂಬ ಕೃತಕ ರೇಷ್ಮೆ ಎಳೆಗಳನ್ನು ತಯಾರಿಸ ಬಹುದು ಎಂದು ಇತ್ತೀಚಿನ ಪ್ರಯೋಗಗಳು ತೋರಿಸಿವೆ. ಇದರಿಂದ ತಯಾರಾದ ಬಟ್ಟೆಗಳು ಅಷ್ಟೊಂದು ಉತ್ತಮದರ್ಜೆಯವಲ್ಲದಿದ್ದರೂ ಅವುಗಳಿಗೆ ಹುಳು ಹಿಡಿಯುವುದಿಲ್ಲ. 
(ಬಿ.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ